ಈಸ್ಕಿನೀಸ್
ಸು. ಕ್ರಿ.ಪೂ. 389-314 ಗ್ರೀಕ್ ನಗರರಾಜ್ಯವಾದ ಅಥೆನ್ಸಿನ ವಾಗ್ಮಿ. ಡೆಮಾಸ್ತನೀಸನ ಪ್ರಬಲ ವಿರೋಧಿ. ಬಡ ಕುಟುಂಬದಲ್ಲಿ ಜನಿಸಿ ತನ್ನ ಸ್ವಸಾಮಥ್ರ್ಯದಿಂದಲೇ ಮೇಲೇರಿ ಬಂದವ. 
ತಂದೆ ಸಾಮಾನ್ಯ ಶಾಲಾ ಉಪಾಧ್ಯಾಯ, ತಾಯಿ ನರ್ತಕಿ ಎಂಬ ವಿಷಯಗಳನ್ನೇ ಮುಂದು ಮಾಡಿ ಡೆಮಾಸ್ತನೀಸ್ ಇವನನ್ನು ಅವಮಾನಪಡಿಸಿದ್ದುಂಟು. ತಂದೆ ಒಬ್ಬ ಬಡ ಅಧ್ಯಾಪಕನೆನ್ನುವುದು ನಿಜವಾದರೂ ಇವನ ಸೋದರರು ಪ್ರಭಾವಶಾಲಿಗಳಾದ ನಾಗರಿಕರಾಗಿದ್ದುದಲ್ಲದೆ, ಅವರಲ್ಲಿ ಒಬ್ಬ ರಾಯಭಾರಿಯಾಗಿದ್ದನೆನ್ನುವುದು ವಾಸ್ತವ. ವ್ಯಾಯಾಮಶಾಲೆಯಲ್ಲಿ ಪಳಗಿದ್ದುದರಿಂದ ಈಸ್ಕಿನೀಸ್ ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಹೆಸರುಗಳಿಸಿದ. ಈ ಮಧ್ಯೆ ಒಬ್ಬ ನ್ಯಾಯಾಧೀಶನ ಗುಮಾಸ್ತನಾಗಿ, ಅನಂತರ ಒಬ್ಬ ಸಾಮಾನ್ಯ ನಟನಾಗಿ, ಕೊನೆಗೆ ರಾಜಕೀಯ ಧುರೀಣರಾದ ಅರಿಸ್ಟೋಫೋನ್ ಮತ್ತು ಯೂಬುಲಸರಿಗೆ ಕಾರ್ಯದರ್ಶಿಯಾಗಿ ಚುನಾವಣೆಗೆ ಸ್ಪರ್ಧಿಸಲು ಸಹಾಯ ಮಾಡಿದರು. ಈ ವೇಳೆಗೆ ಇವನಿಗೆ 40 ವರ್ಷ ತುಂಬಿತ್ತು. ಸಾರ್ವಜನಿಕ ಭಾಷಣ ಮಾಡುವ ಅವಕಾಶ ದೊರೆತದ್ದರಿಂದ ಭಾಷಣಕಲೆಗಳಲ್ಲಿದ್ದ ಈತನ ನಿಜವಾದ ಸಾಮಥ್ರ್ಯ ಲೋಕವಿದಿತವಾಗಲು ಅನುಕೂಲವಾಯಿತು. ನ್ಯಾಯಾಂಗ ಮತ್ತು ರಾಜಕೀಯ ವಿಷಯಗಳ ಬಗ್ಗೆ ಈಸ್ಕಿನೀಸ್ ಶರವೇಗದಲ್ಲಿ ಪರಿಣತಿಯನ್ನು ಸಂಪಾದಿಸಿ ತನ್ನ ಮಾತುಗಾರಿಕೆಯನ್ನು ಬೆಳೆಸಿಕೊಂಡ, ಕೋಮಲತೆ, ನವೀನತೆ, ರಮ್ಯತೆ ಮತ್ತು ವಿಶೇಷತೆ ಇದ್ದುದರಿಂದ ಇವನ ಭಾಷಣಗಳು ಮನೋಜ್ಞವಾಗಿರುತ್ತಿದ್ದವು.

ಕ್ರಿ.ಪೂ. 348ರಲ್ಲಿ ಮ್ಯಾಸಿಡೋನಿಯದ ಫಿಲಿಫ್‍ನ ವಿರುದ್ಧ ಸೈನ್ಯ ಸಂಘಟಿಸಲು ಈತನನ್ನು ಪೆಲೊಪೋನಿಸಸ್‍ಗೆ ಕಳುಹಿಸಲಾಯಿತು. ಈ ಯತ್ನದಲ್ಲಿ ವಿಫಲನಾದ ಮೇಲೆ ಮುಂದಿನ ವರ್ಷವೇ ಫಿಲಿಪನ ಜೊತೆಯಲ್ಲಿ ಕೌಲು ಮಾಡಿಕೊಳ್ಳಲು ತೆರಳಿ ಅದರಲ್ಲಿ ಯಶಸ್ವಿಯಾದ. ರಾಷ್ಟ್ರದ ಹಿತದೃಷ್ಟಿಯಿಂದ ಯುದ್ಧಕ್ಕಿಂತ ಶಾಂತಿಯೇ ಮಿಗಿಲೆಂದು ಈತ ಭಾವಿಸಿದ್ದ, ಕ್ರಿ.ಪೂ. 345ರಲ್ಲಿ ಇವನ ವಿರೋಧಿ ಡೆಮಾಸ್ತನೀಸ್ ಇವನನ್ನು ರಾಷ್ಟ್ರದ್ರೋಹಿ ಮತ್ತು ಲಂಚಕೋರನೆಂದು ಆಪಾದಿಸಿದ. ಈ ಆಪಾದನೆಯಿಂದ ಬಹಳ ಕಷ್ಟಪಟ್ಟು ತಪ್ಪಿಸಿಕೊಳ್ಳಬೇಕಾಯಿತು. ಈಸ್ಕನೀಸ್ ಕೂಡ ಡೆಮಾಸ್ತನೀಸನಂತೆ ಶಕ್ತಿಯುತವಾಗಿ ಭಾಷಣ ಮಾಡಿ, ತನ್ನ ವಿರೋಧಿಗಳನ್ನು ಎದುರಿಸಲು ಪ್ರಯತ್ನ ಮಾಡಿದ. ಕೊನೆಗೊಮ್ಮೆ ಡೆಮಾಸ್ತನೀಸನಿಗೆ ಬಂಗಾರದ ಕಿರೀಟವನ್ನು ಹಾಕಬೇಕೆಂದು ಟೆಸಿಪೋನ್ ಸಲಹೆ ಮಾಡಿದಾಗ, ಈಸ್ಕನೀಸ್ ಅದನ್ನು ಪ್ರಬಲವಾಗಿ ವಿರೋಧಿಸಿ ಡೆಮಾಸ್ತನೀಸನ ಸಾರ್ವಜನಿಕ ಜೀವನವನ್ನು ತನ್ನ ಭಾಷಣಗಳಲ್ಲಿ ಹೀಗಳೆದ. ಡೆಮಾಸ್ತನೀಸ್ ಇವನಿಗಿಂತ ಮೇಲ್ಮಟ್ಟದ ವಾಗ್ಮಿಯೂ ಕಾರ್ಯಚತುರನೂ ಆದ್ದರಿಂದ ಈಸ್ಕಿನೀಸನ ಸಂಚು ನಡೆಯಲಿಲ್ಲ. ಅವಮಾನಿತನಾಗಿ ಅಥೆನ್ಸಿನಿಂದ ಓಡಿಹೋದ. ಹೊರನಾಡಿನಲ್ಲಿ ಭಾಷಣಕಲೆಯ ಶಾಲೆಯಲ್ಲಿ ಭಾಷಣಕಲೆಯನ್ನು ಬೋಧಿಸುವ ವೃತ್ತಿಯನ್ನು ಕೆಲಕಾಲ ಅವಲಂಬಿಸಿದ. ತನ್ನ ಜೀವಮಾನದಲ್ಲಿ ಆತ ಮತ್ತೆ ಅಥೆನ್ಸಿಗೆ ಬರಲಾಗಲಿಲ್ಲ. 
 (ಕೆ.ಎಸ್.ಎನ್.; ಕೆ.ಎ.; ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ